Connect with us

ಪ್ರೇಮ ಬರಹ

ನೀಲಾ., ಲವ್ @ ಫಸ್ಟ್ ಸೈಟ್…!!! ಪ್ರೇಮಿಗಳ ದಿನದ ಸ್ಪೆಶಲ್…!!!

Published

on

Spread the love

ಇವತ್ತು ಪ್ರೇಮಿಗಳ ದಿನ. ಅಯ್ಯೋ ಬಿಡ್ರಿ ಪ್ರತಿ ದಿನವೂ ಪ್ರೇಮಿಗಳ ದಿನವೇ. ಆದ್ರೂ ಇವತ್ ಒಂಥರಾ ಸ್ಪೆಶಲ್. ಇವತ್ತಿನ ದಿನ ಹಲವು ಪ್ರೇಮಿಗಳು ಪ್ರೇಮ ನಿವೇದನೆ ಮಾಡಿಕೊಳ್ತಾರೆ. ಪಾಪ ಕೆಲವರ ಲವ್ ಬ್ರೇಕ್ ಅಪ್ ಕೂಡ ಆಗುತ್ತೆ ಬಿಡಿ. ಅದೆಲ್ಲಾ ಇರ್ಲಿ ನಾನಿವತ್ತು ನಿಮನಗೆ ನನ್ನ ಲವ್ ಸ್ಟೋರಿ ಹೇಳ್ತೀನಿ ಕೇಳಿ. ಓದಿದ ಮೇಲೆ ನಿಮಗೆ ಸ್ಪೆಶಲ್ ಅನಿಸ್ತೋ ಇಲ್ವೋ ಹೇಳಿ. ನನಗಂತು ಯಾವತ್ತಿಗೂ ನನ್ನ ಲವ್ ಸ್ಚೋರಿ ಸಲ್ಪೆಶಲ್.

ನನ್ನ ಮೊದಲ ಪ್ರೀತಿಗೆ ನಾನು ಇಟ್ಟಿದ್ದ ಹೆಸರು ‘ನೀಲಾಂಬರಿ’. ಅವಳ ಅಪ್ಪ-ಅಮ್ಮ ಏನು ಹೆಸರಿಟ್ಟಿದ್ದರೋ ಗೊತ್ತೇ ಇಲ್ಲ ಅನ್ನಿ. ಅವಳ ‘ನೀಲಿ’ ಕಂಗಳಿಗೆ ಮನಸೋತಿದ್ದ ನಾನು ಅವಳನ್ನು ಶಾರ್ಟ್ ಅಂಡ್ ಸ್ವೀಟಾಗಿ ‘ನೀಲಾ’ ಅಂತಲೇ ಕರೀತಿದ್ದೆ. ಅವಳ ಮೊದಲ ನೋಟಕ್ಕೆ ‘ಕ್ಲೀನ್ ಬೋಲ್ಡ್’ ಆಗಿದ್ದ ನಾನು, ಅವಳಲ್ಲಿ ಪ್ರೇಮ ನಿವೇದನೆ ಮಾಡಿಕೊಳ್ಳಲು ಹಲವು ಬಾರಿ ವಿಫಲಯತ್ನ ಮಾಡಿದ್ದೆ ಕೂಡ. ಇದೇ ಫೆಬ್ರವರಿ 14 ರಂದು ಧೈರ್ಯಮಾಡಿ ಅವಳಿಗೆ “ಐ ಲವ್ ಯು” ಎಂದು ಹೇಳಿದ್ದೆ.

ಆದ್ರೆ, ನನ್ನ ಪ್ರೀತಿಯನ್ನು ನಯವಾಗಿ ತಿರಸ್ಕರಿಸಿದ್ದ ಅವಳು “ಹಲೋ! ನೀನು ಪಾರ್ಟ್ ಟೈಮ್ ಜಾಬ್ ಮಾಡುತ್ತಿರೋ ಹುಡುಗ, ನನ್ನನ್ನು ಪ್ರೀತಿಮಾಡಿ, ಸಂಸಾರ ನೌಕೆ ಸಾಗಿಸಲು ಕಷ್ಟವಾಗಬಹುದು. ನಿನಗೆ ಪರ್ಮನೆಂಟ್ ಕೆಲಸ ಸಿಕ್ಕ ನಂತರ ನೋಡೋಣ” ಎಂದಿದ್ದಳು.
ಅವಳ ದೂರದೃಷ್ಟಿ ಹಾಗು ಧೈರ್ಯ ಕಂಡು ನಿಬ್ಬೆರಗಾಗಿದ್ದೆ. ಆದರೂ ನನ್ನ ಮೊದಲ ಪ್ರೀತಿಯೇ ರಿಜೆಕ್ಟ್ ಆಯ್ತಲ್ಲಾ ಎಂದು ನನ್ನ ಮನಸ್ಸು ತುಂಬಾ ನೊಂದಿತ್ತು. ಎಲ್ಲಾ ಹುಡುಗಿಯರ ಹಾಗೆ ನನ್ನ ‘ನೀಲಾ’ ಆ ದಿನ ಆಲೋಚಿಸಿದ್ದರೆ, ಬಹುಶಃ ನನ್ನ ಪ್ರೀತಿಗೆ ಅವಳು ಅಂದೇ ಹಸಿರು ನಿಶಾನೆ ತೋರಿಸುತ್ತಿದ್ದಳೇನೋ? ಆದರೆ ಅವಳು ಎಲ್ಲರಂತವಳಲ್ಲ. ಶಿ ಈಸ್ ಟಿಪಿಕಲ್! ಶಿ ಈಸ್ ಡಿಫರೆಂಟ್!

ಇದಾದ ಒಂದು ವರ್ಷದ ನಂತರ ನಾನು ಪರ್ಮನೆಂಟ್ ಕೆಲಸಕ್ಕೆ ಸೇರಿದೆ. ಕೆಲಸ ಸಿಕ್ಕ ಮರುದಿನವೇ ಮತ್ತೊಮ್ಮೆ ಪ್ರೊಪೋಸ್ ಮಾಡಿದೆ. ನಾನು ಇಷ್ಟ ಪಟ್ಟ ಹುಡುಗಿ ನನ್ನ ಕೈ ಹಿಡಿದಾಗ ಆಕಾಶದ ಚಂದ್ರನನ್ನೇ ನನ್ನ ಬೊಗಸೆಯಲ್ಲಿ ಹಿಡಿದಿದ್ದೇನೋ ಎನ್ನುವಷ್ಟು ಖುಷಿಯಾಗಿತ್ತು. ಅವಳ ಕೈ ಹಿಡಿದು ಜೊತೆ-ಜೊತೆಯಾಗಿ ಸಾವಿರಾರು ಮೈಲಿ ಸುತ್ತಿದೆ. ನಾವು ಜೊತೆ ಜೊತೆಯಾಗಿ ಪಯಣಿಸುವ ಹೊತ್ತಲ್ಲಿ,
“ನೂರು ಜನ್ಮ.. ಕೂಡಿ ಬಾಳುವ..
ಜೋಡಿ.. ನಮ್ಮದು….
ಎಲ್ಲಾ ಎಲ್ಲೆ.. ಮೀರಿದಾಗಲು..
ಪಯಣಾ ನಿಲ್ಲದು…..”
ಎಂದು ನಾನು ಹಾಡುತ್ತಿದ್ದರೆ, ಅವಳು ನನ್ನನ್ನು ಓರೆಗಣ್ಣಿನಲ್ಲಿಯೇ ನೋಡುತ್ತಾ ಮನದಲ್ಲಿಯೇ ನಸು ನಗುತ್ತಿದ್ದಳು.

ಆದರೆ ಆ ನಗು-ಸಂತೋಷ ಬಹಳ ದಿನ ಉಳಿಯಲಿಲ್ಲ. ಮನೆ ಮುಂದೆ ನಿಂತಿದ್ದ ಅವಳನ್ನು ಯಾರೋ ಅಪಹರಿಸಿದ್ದರು! ಅಂದು ನನಗೆ ಆಕಾಶವೇ ತಲೆಗೆ ಅಪ್ಪಳಿಸಿದ ಅನುಭವ. ರಾತ್ರಿ-ಹಗಲೆನ್ನದೆ ಅವಳನ್ನು ಸ್ನೇಹಿತರ ಜೊತೆ ಹುಡುಕಿದೆ. ಎಲ್ಲಿ ಹುಡುಕಿದರೂ ಅವಳ ಸುಳಿವೇ ಸಿಗಲಿಲ್ಲ. ಪ್ರತಿದಿನ ಅವಳ ನೆನಪು ಸದಾ ಕಾಡುತ್ತಲೇ ಇತ್ತು. ಹಲವು ತಿಂಗಳಾದರೂ ಅವಳ ನೆನಪು ನನ್ನ ಮನಸ್ಸಿನಿಂದ ಮಾಸಲಿಲ್ಲ. ಅವಳಿಲ್ಲದ ದಿನಗಳನ್ನು ಕಳೆಯುವುದು ಕಷ್ಟಾಸಾಧ್ಯವಾಯ್ತು. ಅವಳ ನೆನಪಿನ ಗುಂಗಿನಲ್ಲಿದ್ದ ನನಗೆ ಮತ್ತ್ಯಾವ ಹುಡುಗಿಯನ್ನು ಕಣ್ಣೆತ್ತಿ ನೋಡಲೂ ಸಹ ಮನಸ್ಸಾಗಲಿಲ್ಲ.

ಆದರೂ ಸಂಗಾತಿಯಿಲ್ಲದೆ ಜೀವನ ಸಾಗಿಸುವುದಾದರೂ ಹೇಗೆ? ಎನ್ನುವ ಪ್ರಶ್ನೆ ನನ್ನನ್ನು ಸದಾ ಕಾಡುತ್ತಲೇ ಇತ್ತು. ಜೊತೆಗೆ ನನ್ನ ಸ್ನೇಹಿತರು ಸಹಾ ‘ನೀಲಾಂಬರಿ’ ಯನ್ನು ಮರೆತು ಬೇರೊಬ್ಬ ಹುಡುಗಿಯನ್ನು ಪ್ರೀತಿಸಲು ಸಲಹೆ ನೀಡಿದರು. ನನಗೂ ನನ್ನ ಜೊತೆ ಜೊತೆ ಸಾಗಲು ಒಬ್ಬ ಸಂಗಾತಿಯ ಅನಿವಾರ್ಯತೆ ಇತ್ತು. ಆಗ ನನ್ನ ಕಣ್ಣಿಗೆ ಬಿದ್ದವಳೇ ‘ಶ್ವೇತಾಂಬರಿ’ ಆಲಿಯಾಸ್ ‘ಶ್ವೇತಾ’.

ನನಗೂ ಶ್ವೇತಾ ಇಷ್ಟವಾದಳು. ಅಂದು ನನ್ನ ಬೇಜವಬ್ದಾರಿಯಿಂದಲೇ ನೀಲಾ ಕಳೆದುಹೋದಳು ಎಂದು ಜನರಾಡುವ ಮಾತುಗಳಿಗೆ..
“ಜರಿವಾ.. ಜನರೆದುರಿನಲ್ಲಿ.. ನಿನ್ನಾ.. ನೆರಳಾಗಿ ನಿಲ್ಲುವೆ..
ಜಗದಾ.. ಕೊನೆ ತಿರುವವರೆಗೂ… ಬೆರಳಾ.. ನಾ ಹಿಡಿದು ನಡೆಯುವೆ …
ಎಂದೂ.. ನಾನಿರುವೆ.. ಜೊತೆ ಜೊತೆಯಲೀ… ಜೊತೆ ಜೊತೆಯಲೀ…
ಎಂದು ಸಾಂತ್ವನ ಹೇಳಿದವಳೇ ನನ್ನ ಮುದ್ದಿನ ಶ್ವೇತಾ. ಹೀಗೆ ಶ್ವೇತಾ ಜೊತೆ ನಾಲ್ಕು ವರ್ಷ ಕಳೆಯುವುದರೊಳಗೆ ನೀಲಾಳ ನೆನಪು ಮರೆತೇ ಹೋಯ್ತು. ನಾನು ಮತ್ತು ಶ್ವೇತಾ ನಮ್ಮದೇ ಆದ ಪುಟ್ಟ ಪ್ರಪಂಚದಲ್ಲಿ ಮೈಮರೆತು ಪಯಣಿಸೆದೆವು.

ಹೀಗೆ ಕೆಲವು ವರ್ಷಗಳು ಕಳೆದವು. ಮೊನ್ನೆ, ನನ್ನ ಗೆಳೆಯ “ಏನೋ! ಇಷ್ಟು ವರ್ಷ ಕಳೆದರೂ ಇನ್ನೂ ಶ್ವೇತಾ ಜೊತೆನೇ ಓಡಾಡಿಕೊಂಡು ಇದ್ದೀಯಾ? ಬಾ ನನ್ನ ಜೊತೆ, ನಿನಗೋಸ್ಕರ ಒಳ್ಳೆಯ ಹುಡುಗಿ ನೋಡಿದ್ದೀನಿ. ಹೆಸರು ‘ಕನಕಾಂಬರಿ’ ಅಂತಾ. ನಿನಗಂತೂ ತುಂಬಾನೇ ಇಷ್ಟ ಆಗ್ತಾಳೆ” ಎಂದಾಗ ನಾನು ಏನು ಮಾಡಬೇಕೋ ಎಂದು ತಿಳಿಯದೆ ಸುಮ್ಮನಾದೆ. ಅಷ್ಟಕ್ಕೂ ಸುಮ್ಮನಾಗದ ಅವನು, ಕನಕಾಂಬರಿಯನ್ನು ನೋಡಲು ‘ಶ್ವೇತಾ’ ಜೊತೆ ನನ್ನನ್ನೂ ಕರೆದುಕೊಂಡು ನಡದೇ ಬಿಟ್ಟ.

ಶ್ವೇತಾ ಜೊತೆ ‘ಕನಕಾಂಬರಿ’ ಐ ಮೀನ್, ‘ಕನಕ’ಳನ್ನು ನೋಡಲು ತೆರಳುತ್ತಿದ್ದ ಸಮಯದಲ್ಲಿ ಮಡುಗಟ್ಟಿದ ಮೌನ, ಶ್ವೇತಾಳಲ್ಲಿ ಆವರಿಸಿತ್ತು. ಅವಳ ಕಣ್ಣಂಚಿನಲ್ಲಿ ನೀರು ತುಂಬಿತ್ತು. ಬೇರೊಂದು ಹುಡುಗಿಯನ್ನು ನೋಡಲು ಅವಳನ್ನೇ ನಾನು ಕರೆದುಕೊಂಡು ಹೊಗುತ್ತಿರುವುದಕ್ಕೆ ಅವಳಿಗೆ ನನ್ನ ಮೇಲೆ ಅಪರಿಮಿತವಾದ ಸಿಟ್ಟು ಸಹಾ ಬಂದಿತ್ತು. ಕನಕಳ ಮನೆಯ ಮುಂದೆ ನಿಂತು ಅವಳ ಜೊತೆ ಮಾತನಾಡುತ್ತಿರುವ ಸಮಯದಲ್ಲಿ ಒಮ್ಮೆ ಶ್ವೇತಾಳ ಕಡೆ ತಿರುಗಿ ನೋಡಿದೆ. ಅವಳ ಮೊಗದಲ್ಲಿನ ಅಸಹಾಯತೆ ಹಾಗೂ ಕಣ್ಣಂಚಿನಲ್ಲಿನ ನೀರು ಕಂಡು ನನಗೆ ನನ್ನ ಬಗ್ಗೆಯೇ ಬೇಸರವಾಯ್ತು.

ಕೆಲ ವರ್ಷಗಳ ಹಿಂದೆ, ನಾನು ‘ನೀಲಾ’ ಳನ್ನು ಕಳೆದುಕೊಂಡಾಗ ನನ್ನ ಜೊತೆ-ಜೊತೆ ಹೆಜ್ಜೆ ಹಾಕಿದವಳು ‘ಶ್ವೇತಾ’. ನಾನು ‘ನೀಲಾ’ ನೆನಪಲ್ಲೇ ಮುಳುಗಿದ್ದಾಗ ನನ್ನಲ್ಲಿ ಆತ್ಮಸ್ಥೈರ್ಯ ತುಂಬಿದವಳು ‘ಶ್ವೇತಾ’. ಜನರು ನನ್ನನ್ನು ಟೀಕಿಸಿದಾಗ ಅವರಿಗೆ ದಿಟ್ಟ ಉತ್ತರ ನೀಡಿದವಳೇ ಈ ‘ಶ್ವೇತಾ’. ಹಾಗಾಗಿ ಅವಳನ್ನು ಬಿಟ್ಟಿರಲು ಸಾಧ್ಯವೇ ಇಲ್ಲ ಎಂದೆನಿಸಿ ಹತ್ತಿರ ಹೋಗಿ ಅವಳನ್ನು ಬಿಗಿದಪ್ಪಿಕೊಂಡೆ. ಕನಕಳನ್ನು ತೋರಿಸಲು ನನ್ನ ಜೊತೆ ಬಂದಿದ್ದ ನನ್ನ ಗೆಳಯನಿಗೆ ಕೈಗೆ ‘ಕನಕ’ಳ ಕೈ ಇಟ್ಟು, ನಾನು-ಶ್ವೇತಾ ಕೈ-ಕೈ ಹಿಡಿದು ಮನೆಯತ್ತ ಸಾಗಿದೆವು.

ಸ್ನೇಹಿತರೇ ಇಷ್ಟೊತ್ತು ನಾನು ಹೇಳಿದ್ದು ಹುಡುಗಿಯರ ಕಥೆಯಲ್ಲ. ಅಂದು ನನ್ನ ಜೊತೆಗಿದ್ದ, ಇಂದು ನನ್ನ ಜೊತೆಗಿರುವ ಹಾಗು ಮುಂದೆ ನಾನು ಜೊತೆಯಿರಲು ಬಯಸಿದ್ದ ಕಾರುಗಳ ಕಥೆ. ಪ್ರೇಮಿಗಳ ದಿನಾಚರಣೆಯಂದು ಬರೀ ‘ಹುಡುಗ’ ಅಥವಾ ‘ಹುಡುಗಿ’ಯರಷ್ಟೇ ಪರಸ್ಪರ ಪ್ರೀತಿಸಬೇಕೆಂದೇನಿಲ್ಲ. ನಾವು ಬಳಸುವ ನಮ್ಮ ಬಟ್ಟೆ, ವಾಚು, ಪೆನ್, ಕಾರು ಹಾಗೆಯೇ ನಾವಿರುವ ಮನೆ, ಕೆಲಸ ಮಾಡುವ ಆಫೀಸ್, ಹೀಗೆ ಪ್ರತಿಯೊಂದನ್ನೂ ಒಬ್ಬ ‘ಹುಡುಗ’ ತಾನು ಇಷ್ಟ ಪಡುವ ಹುಡುಗಿಯನ್ನು ಪ್ರೀತಿಸುವಷ್ಟೇ ಪ್ರೀತಿಸಬಸುಹುದು.

ಇಂದು, ನೀವು ಕೂಡಾ ಪ್ರಾಮಾಣಿಕವಾಗಿ ಪ್ರೀತಿಸಿ. ನಿಮ್ಮ ಬದುಕನ್ನು, ನಿಮ್ಮ ಕೆಲಸವನ್ನು, ನಿಮ್ಮ ಮನೆಯನ್ನು, ನಿಮ್ಮ ಮನೆಯವರನ್ನೂ ಹಾಗೆಯೇ ನೆರೆ-ಹೊರೆಯವರನ್ನು. ನೀವು ಏನನ್ನೇ ಪ್ರೀತಿಸಿ, ಯಾರನ್ನೇ ಪ್ರೀತಿಸಿ, ನಿಮ್ಮ ಪ್ರೀತಿಯಲ್ಲಿ ಪಾವಿತ್ರ್ಯತೆ ಇರಲಿ. ಪ್ಲೀಸ್.

– ಸಂಪತ್ ಕುಮಾರ್ ಬೆಳಗೆರೆ, Karnaataka.in.

Continue Reading
Click to comment

Leave a Reply

Your email address will not be published. Required fields are marked *