Connect with us

ಒಳ್ಳೆ ವಿಷ್ಯ

ನಾ ಕಂಡ ಶಬರಿಮಲೆ.. !!! ಸ್ವಾಮಿಯೇ ಶರಣಂ ಅಯ್ಯಪ್ಪ..!!!

Published

on

Spread the love

ನಾಲ್ಕೈದು ವರ್ಷದಿಂದ ಅನ್ಕೊಂಡಿದ್ದೆ, ಮಾಲೆ ಹಾಕಿ ಶಬರಿಮಲೆಗೆ ಹೋಗಬೇಕು ಅಂತ. ಆದ್ರೆ ಸಾಧ್ಯವಾಗ್ತಿರಲಿಲ್ಲ. ಏನಾದ್ರೂ ಒಂದು ಕಾರಣದಿಂದ ತಪ್ಪಿಹೋಗ್ತಿತ್ತು. ಗೆಳೆಯ ರಘುಭಟ್ ಅಂತೂ ‘ಒಂದು ಸಲ ಬನ್ನಿ, ನಿಮ್ಮ ಜೀವನದಲ್ಲಿ ಎಷ್ಟು ಬದಲಾವಣೆ ಆಗುತ್ತೆ ನೋಡಿ’ ಅಂತ ಕರೀತಾನೇ ಇರ್ತಿದ್ರು. ಈ ವರ್ಷ ಹೋಗಲೇ ಬೇಕು ಅಂತ ನಿರ್ಧರಿಸಿ ಮೊನ್ನೆ 2ನೇ ತಾರೀಕು ಮಾಲೆ ಧರಿಸಿದೆ. ಗುರು ಸ್ವಾಮಿ ರಘು ಭಟ್, ಸುವರ್ಣ ನ್ಯೂಸ್‌ನ ಜಯಪ್ರಕಾಶ್ ಶೆಟ್ಟಿ ಸರ್, ನ್ಯೂಸ್ 18ನ ಸಂದೇಶ್ ಪೇತ್ರಿ, ಜೊತೆಗೆ ಹರೀಶ್, ಜೀವನ್, ಎಲ್ಲರೂ ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿಯ ಧ್ಯಾನದಲ್ಲಿ ತೊಡಗಿದೆವು.

41 ದಿನ ಮಾಲೆ ಹಾಕಿ ಹೋದ್ರೆ ಶ್ರೇಷ್ಟ ಅಂತೆ. ಆದ್ರೆ ನಮ್ಮ‌ ಕೆಲಸದ ನಡುವೆ ಅಷ್ಟು ದಿನ ವೃತ ಪಾಲಿಸೋದು ಕಷ್ಟವಾಗಿದ್ದರಿಂದ ಹಾಕುವ 3 ದಿನವಾದ್ರೂ ನಿಯಮ ನಿಷ್ಟೆಯಿಂದ ಆರು ಜನ ವೃತ ಮಾಡಿದ್ವಿ. ಶಬರಿ ಮಲೆಗೆ ಹೋಗಿ ಬರಲು 1900 ಕಿಲೋ ಮೀಟರ್. ಕೆ.ಆರ್.ಪುರಂ ಸಮೀಪದ ಅಯ್ಯಪ್ಪ ಸ್ವಾಮಿ ದೇವಳದಲ್ಲಿ ಇರುಮುಡಿ ಹೊತ್ತು ಹೊರಟಿದ್ದು ನೇರವಾಗಿ ಗುರುವಾಯೂರಿಗೆ. ಅಲ್ಲಿಂದ ಚೋಟ್ಟಾಯಿನಕೆರೆ ಭಗವತಿ ದರ್ಶನ, ಅಲ್ಲಿಂದ ವೈಕ್ಕಂ ಶಿವಾಲಯ. ಅಲ್ಲಿಂದ ನೇರ ಎರಮಲೈ.

ನಾನು ಕನ್ಯಾಸ್ವಾಮಿ‌ ಆಗಿದ್ದರಿಂದ ಹೋಳಿಯಂತೆ ಬಣ್ಣ ಹಚ್ಚಿ, ಶರ ಧರಿಸಿ ನೃತ್ಯ ಮಾಡುತ್ತಾ ಹೊರಡಬೇಕು. ಅಲ್ಲಿಂದ ನೇರ ಪಂಪಾ ನದಿಗೆ. ಪಂಪೆಯಲಿ ಸ್ನಾನ‌ಮಾಡಿ, ಇರುಮುಡಿ ತಲೆಮೇಲೆ ಹೊತ್ತು ಮಲೆ ಏರಲು ಶುರುಮಾಡಿದ್ರೆ ಕನಿಷ್ಟ 2 ಗಂಟೆಗಳ ದಾರಿ. ನಡೆದೇ ಸಾಗಬೇಕು. ಅಲ್ಲೇ ಆಶ್ಚರ್ಯ ಕಾದಿತ್ತು. ನಮಗೇ ಏದುಸಿರು ಬಿಡುವಂತಾಗಿತ್ತು. ಆದ್ರೆ ಅಲ್ಲಿ ಮಲೆ ಏರುತ್ತಿದ್ದವರಲ್ಲಿ ಕೆಲವರನ್ನ ನೋಡಿ ಆಶ್ಚರ್ಯವಾಯ್ತು. ಪೋಲಿಯೋ ಭಾದಿತ ಬಾಲಕ, 70 ವರ್ಷ ದಾಟಿದ ವೃದ್ಧರು, ಕಾಲು ಮುರಿದವರು, ಪುಟ್ಟ ಮಕ್ಕಳು ಕಾಣಿಸಿಕೊಂಡ್ರು. ಅಯ್ಯಪ್ಪನಿಂದ ನಮಗೆ ಒಳ್ಳೇದಾಗುತ್ತೆ ಅಂತ ಹೀಗೆ ಮಲೆ ಏರ್ತಿದ್ದೇವೆ ಅನ್ನೋದನ್ನು ಅವರೇ ಹೇಳಿದ್ರು.

ನಾವು ಹೋದ ದಿನ ಅಲ್ಲಿ ಲಕ್ಷಾಂತರ ಜನ. ಆದ್ರೆ ನಮ್ ಜೊತೆಗಿದ್ದ ಗುರುಸ್ವಾಮಿ ರಘುಭಟ್ ಅವರಿಗೆ ಇದು 21ನೇ ವರ್ಷದ ಮಾಲಧಾರಣೆ. ಹಾಗಾಗಿ ಅವರಿಗೆ ಶಬರಿಮಲೆಯಲ್ಲಿ ಸಿಕ್ಕಾಪಟ್ಟೆ ಪರಿಚಯ. ಅವರಿಂದಾಗಿ ನಮಗೆ ದರ್ಶನ ಸುಲಭವಾಯ್ತು. ಒಂದು ಬಾರಿ ಸಾಲದು ಅಂತ ಮತ್ತೆ ಮತ್ತೆ ದರ್ಶನ ಮಾಡಿಸಿದ್ರು. ಆದ್ರೆ ನನಗೆ ಆಶ್ಚರ್ಯ ಅನಿಸಿದ್ದು, ಅಲ್ಲಿ ಸೇರಿದ್ದ ಭಕ್ತ ಸಮೂಹ ನೋಡಿ. ಯಪ್ಪಾ, ಅಕ್ಷರಶಃ ಜನಸಾಗರ. ಭಾರತದಲ್ಲಿ ಒಂದು ದೇವಾಲಯಕ್ಕೆ ತುಂಬಾ ಕಷ್ಟಪಟ್ಟು ತಲುಪಬೇಕು ಅಂತಿದ್ರೆ ಅವುಗಳಲ್ಲಿ ‘ಶಬರಿಮಲೆ’ ಪ್ರಮುಖ ಸ್ಥಾನದಲ್ಲಿರುತ್ತದೆ.

ಆದ್ರೆ ಈ ಪಡಿ ಭಕ್ತರು ಅದ್ಯಾವುದನ್ನೂ ಲೆಕ್ಕಿಸದೇ ಸಾಗರೋಪದಿಯಲ್ಲಿ ಹರಿದು ಬರುವುದು ನೋಡಿದ್ರೆ ನಿಜಕ್ಕೂ ಬೆಕ್ಕಸ ಬೆರಗಾಗಲೇಬೇಕು. ‘ಸ್ವಾಮಿಯೇ ಅಯ್ಯಪ್ಪೋ’  ಅಂತ ಘೋಷಣೆಗಳನ್ನು ಕೂಗುತ್ತಾ ಎಲ್ಲರೂ ಆ ಮಲೆ ಏರಿ, ಮಲೆ ಇಳಿಯುವವರೆಗಿನ ಉತ್ಸಾಹವೇ ಒಂದು ಆಕರ್ಷಣೆ. ಒಂದೆರೆಡು ಸೆಕೆಂಡ್ ಅಷ್ಟೆ ಅಯ್ಯಪ್ಪ ಮೂರ್ತಿಯ ದರ್ಶನವಾಗೋದು. ಆ ದರ್ಶನಕ್ಕಾಗಿ ನೂರಾರು ಕಿಲೋಮೀಟರ್ ನಡೆದು ಬರುವರು ಅದೆಷ್ಟೋ ಜನ. ಅಯ್ಯಪ್ಪ ಸ್ವಾಮಿಯ ವಿಶೇಷವೆಂದರೆ, ಇಲ್ಲಿ ಭಕ್ತಿಗಷ್ಟೇ ಬೆಲೆ. ಭಕ್ತಿಯ ಹೊರತಾಗಿ ಮತ್ತೆಲ್ಲವೂ ನಗಣ್ಯ.

ಆ ಕ್ಷೇತ್ರ ಒಂಥರಾ ಸ್ವರ್ಗ. ಅ ಸ್ವರ್ಗದೊಡೆಯ ‘ಅಯ್ಯಪ್ಪ’. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಸೇರಿದಂತೆ ದಕ್ಷಿಣದ ರಾಜ್ಯಗಳ ಭಕ್ತರ ಸಂಖ್ಯೆ ಅಪಾರ. ಬರುವ ಭಕ್ತರೆಲ್ಲರಿಗೂ ಅನುವಾಗುವಂತೆ ವ್ಯವಸ್ಥೆಗಳು, ಅಚ್ಚುಕಟ್ಟಾದ ನಿಯಮಗಳು ಶಬರಿಮಲೆಯನ್ನು ಇನ್ನಷ್ಟು ಆಪ್ತವಾಗಿಸುತ್ತೆ. ಇನ್ನು ಅಲ್ಲಿನ ಭದ್ರತಾ ವ್ಯವಸ್ಥೆಯೂ  ಕಟ್ಟುನಿಟ್ಟು. ಅಲ್ಲಿರೋ ಭದ್ರತಾ ಸಿಬ್ಬಂದಿ ಬರಿಯ ವೃತ್ತಿ ಧರ್ಮ ಪಾಲಿಸೋದು ಮಾತ್ರವಲ್ಲದೇ, ಧರ್ಮ ವೃತ್ತಿಯನ್ನೂ ಮಾಡ್ತಿದ್ದಾರೆ. ಇರುಮುಡಿ, ಹದಿನೆಂಟು ಮೆಟ್ಟಿಲು, ಅಯ್ಯಪ್ಪ ದರ್ಶನ, ಇವೆಲ್ಲಾ ಭಕ್ತರ ಪಾಲಿಗೆ ಒಂದು ಸಂಭ್ರಮ.

ಯಾರೂ ಕಷ್ಟಪಟ್ಟು ವೃತ ಮಾಡಿದಂತೆ ಕಾಣೋದೇ ಇಲ್ಲ. ಎಲ್ಲರೂ ಇಷ್ಟಪಟ್ಟು ಅಯ್ಯಪ್ಪನ ದರ್ಶನಕ್ಕೆ ಹಾತೊರೆಯುತ್ತಿರುತ್ತಾರೆ. ನಾನು ಹೋಗಿದ್ದು ಮೊದಲ ಸಲವಾದರೂ ನನಗೆ ಎಲ್ಲೂ ಕಷ್ಟವೆನಿಸದ ಹಾಗೆ ಜೊತೆಗಿದ್ದು ಎಲ್ಲಾ ಅದ್ಭುತ ಅನುಭವಿಸುವಂತೆ ಮಾಡಿದ ಗುರುಸ್ವಾಮಿ ‘ರಘು ಭಟ್’ ಅವರಿಗೆ ಎಷ್ಟು ದನ್ಯವಾದ ಹೇಳಿದರೂ ಸಾಲದು. ಅವತ್ತು ಅಲ್ಲೇ ಮಲಗೆದ್ದು, ಬೆಳಗ್ಗೆ ಮತ್ತೆ ಅಯ್ಯಪ್ಪನ ದರ್ಶನ ಮಾಡಿ ಅಲ್ಲಿಂದ ಹೊರಟಿದ್ದು ಮಧುರೈ ಮೀನಾಕ್ಷಿಯ ನೋಡಲು. ಅಲ್ಲೂ ಅದ್ಭುತ ದರ್ಶನ.

ಮರುದಿನ‌ ಅಲ್ಲಿಂದ ಪಳನಿ ಮುರುಗನ್ ದೇವಸ್ಥಾನಕ್ಕೆ ಹೋಗಿ ಅಲ್ಲಿಯೂ ದರ್ಶನ ಮುಗಿಸಿ ನೇರವಾಗಿ ಬೆಂಗಳೂರಿಗೆ ಬಂದು ಮಾಲೆ ತೆಗೆದೆವು. 5 ದಿನದ ಅಯ್ಯಪ್ಪ ಸ್ವಾಮಿ ಸನ್ಯಾಸ ವೃತ ಅಲ್ಲಿಗೆ ಮುಗಿದಿತ್ತು. ಆದ್ರೆ ಆ ಐದು ದಿನ ನನ್ನ ಪಾಲಿನ ಅದ್ಭುತ ದಿನಗಳು. 5 ದಿನದಲ್ಲಿ ನಾನು 7-8 ದೇವಸ್ಥಾನ ಸುತ್ತಿದ್ದು ಇದೇ ಮೊದಲು. ಜೊತೆಗೆ ಬಹು ವರ್ಷದ ಕನಸಾಗಿದ್ದ ಅಯ್ಯಪ್ಪನ ದರ್ಶನವೂ ಆಯ್ತು.

ಈ 5 ದಿನ ನನ್ನ ಮುಂದಿನ ಬದುಕು ಸುಗಮವಾಗಿಸೋ ನಂಬಿಕೆ ಇದೆ. ಜೊತೆಗೆ ಎಂದಿನಂತೆ ನನ್ನ ಶ್ರಮ ಜೊತೆಗಿರುತ್ತೆ. ಅನನ್ಯ ಅನುಭವಕ್ಕೆ ನಾನು ಧನ್ಯ. ‘ಸ್ವಾಮಿಯೇ ಶರಣಂ ಅಯ್ಯಪ್ಪ’.

  •   ಕೀರ್ತಿ ಶಂಕರಘಟ್ಟ, Karnaataka.in