Connect with us

ಪ್ರೇಮ ಬರಹ

“ಹೆಣ್ಣು”… ಅರ್ಥೈಸಿದಷ್ಟು ಅರ್ಥೈಸಲಾಗದ “ಸಿಹಿಯಾದ ಒಗಟು”…!!!

Published

on

Spread the love

ಒಬ್ಬ ಫೋಟೋಗ್ರಾಫರ್. ಹೆಸರು ಮ್ಯಾಥೀವ್. ನಮ್ಮ ಕಥೆಯ ಹೀರೊ. ಇಂಗ್ಲೆಂಡ್ ನ ರಸ್ತೆಗಳಲ್ಲಿ ಕಣ್ಣಿಗೆ ಮುದನೀಡೋ ತಾಣಗಳನ್ನು ತನ್ನ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯುತ್ತಾ ಸುತ್ತಾಡುತ್ತಿರುತ್ತಾನೆ.

ಒಂದಷ್ಟು ಫೋಟೊಗಳನ್ಮು ಕ್ಲಿಕ್ಕಿಸಿ, ಹಾಗೇ ಒಂದು ಕಾಫಿ ಶಾಪ್ ಗೆ ಬರ್ತಾನೆ. ತಾನು ಕೂತಿದ್ದ ಮುಂದಿನ ಟೇಬಲ್ ನಲ್ಲಿ ಒಬ್ಬ ಸುಂದರ ಯುವತಿ, ಕಾಫಿ ಕುಡಿಯುತ್ತಾ ಪುಸ್ತಕ ಓದುತ್ತಾ ಕುಳಿತಿರುತ್ತಾಳೆ. ಆಕೆಯೇ ಈ ಕಥೆಯ ಹೀರೋಯಿನ್ ಆ್ಯನಾ. ಸಿಂಪಲ್ ಅಂಡ್ ನ್ಯಾಚುರಲ್ ಬ್ಯೂಟಿ.

ಅವಳನ್ನು ಕಂಡ ಆ ಯುವ ಫೋಟೋಗ್ರಾಫರ್ ಮನದಲ್ಲಿ ಏನೋ ಒಂದು ಆಸೆ ಚಿಗುರೊಡೆಯುತ್ತೆ. ಸೀದಾ ಎದ್ದವನೆ ಆಕೆಯ ಬಳಿಗೆ ಬಂದು. ನಾನು ನಿಮ್ಮ ಫೋಟೋ ತೆಗೆಯಬಹುದಾ ಅಂತ ಕೇಳ್ತಾನೆ. ಒಂದು ಚಿತ್ರ ಸಾವಿರ ಪದಗಳನ್ನು ಹೇಳುತ್ತೆ ಅಂತಾರೆ. ಆದ್ರೆ ನಿಮ್ಮ‌ ಸೌಂದರ್ಯವನ್ನು ವರ್ಣಿಸುವ ಯಾವುದೇ ಪದ ಇಲ್ಲ. ಎಂದು ಆಕೆಯ ಸೌಂದರ್ಯ ಹೊಗಳುತ್ತಾನೆ.

ಸಡನ್ ಆಗಿ ಯಾರೋ ಬಂದು ಫೋಟೋ ತೆಗಿತೀನಿ ಅಂದ್ರೆ ಯಾವುದೇ ಹುಡುಗಿರಾದ್ರೂ ನಿರಾಕರಿಸ್ತಾರೆ ಅಲ್ವಾ. ಹಾಗೇ ಆಕೆನೂ ಬೇಡ ಅಂತಾಳೆ. ನೀನ್ಯಾಕೆ ನನ್ನ ಫೋಟೋ ತೆಗೆಯಬೇಕು ಅನ್ಕೊಂಡಿದಿಯಾ ಅಂತ ಆ್ಯನಾ ಕೇಳ್ತಾಳೆ.

ಮ್ಯಾಥಿವ್ ಆಕೆಯನ್ನು ಕನ್ವಿನ್ಸ್ ಮಾಡಲು ಆರಂಭಿಸ್ತಾನೆ. ತಾನೊಬ್ಬ ಫೋಟೋಗ್ರಾಫರ್. ಒಂದು ವರ್ಷದಿಂದ ಈ ವೃತ್ತಿಯಲ್ಲಿದ್ದೀನಿ. ಪ್ರಕೃತಿ ಸೌಂದರ್ಯವನ್ನು ಸೆರೆಹಿಡಿಯೋದು ನನ್ನ ಹಾಬಿ.

ನೀವೊಬ್ಬ ಅಪ್ರತಿಮ ಸುಂದರಿ. ನಿಮ್ಮ ಫೋಟೋ ತೆಗೆಯಲು ಅನುಮತಿ ಕೊಡಿ ಅಂತ ಕೇಳ್ತಾನೆ. ಯುವತಿಗೆ ಸೌಂದರ್ಯದ ಬಗ್ಗೆ ಹೊಗಳಿದ್ರೆ ಕೇಳಬೇಕಾ… ಫೋಟೋ ತೆಗೆಸಿಕೊಳ್ಳಲು ಒಪ್ಕೋತಾಳೆ.

ಇಬ್ಬರೂ ರಮ್ಯತಾಣಗಳಿಗೆ ಹೋಗಿ ಫೋಟೋ ಶೂಟ್ ಮಾಡ್ತಾರೆ. ಆ್ಯನಾಳ ಸೌಂದರ್ಯಕ್ಕೆ ಮ್ಯಾಥೀವ್ ಸಂಪೂರ್ಣ ಮಾರುಹೋಗ್ತಾನೆ. ಕ್ರಮೇಣ ಇಬ್ಬರಲ್ಲೂ ಸ್ನೇಹ ಬೆಳೆಯುತ್ತೆ. ಪ್ರೊಫೆಶನಲ್ ಸಂಬಂಧ ಗೆಳೆತನಕ್ಕೆ ತಿರುಗುತ್ತೆ.

ಒಟ್ಟೊಟ್ಟಿಗೆ ಓಡಾಡೋದು, ಐಸ್ ಕ್ರೀಮ್ ತಿನ್ನೋದು ಆರಂಭವಾಗುತ್ತೆ. ಇಂಗ್ಲೆಂಡ್ ನ ರಸ್ತೆಗಳಲ್ಲಿ ಲವ್ ಬರ್ಡ್ಸ್ ಥರ ಸ್ವಚ್ಛಂದವಾಗಿ ವಿಹರಿಸ್ತಾರೆ.

ಒಂದು ದಿನ. ಇದ್ದಕ್ಕಿದ್ದಂತೆ “ನಿನ್ನ ಮೇಲೆ ನನಗೆ ಮನಸಾಗಿದೆ. ನೀನ್ನ ಮೇಲಿನ ಫೀಲಿಂಗ್ಸ್ ಬದಲಾಗ್ತಿದೆ. ನಿನ್ನನ್ನು ಲವ್ ಮಾಡಲು ಆರಂಭಿಸಿದ್ದೇನೆ”. ಎಂದು ಮ್ಯಾಥೀವ್ ಹೇಳ್ತಾನೆ.

ಸಡನ್ ಆಗಿ ಈ ಮಾತು ಕೇಳಿ ಏನ್ ರಿಯಾಕ್ಟ್ ಮಾಡಬೇಕು ಅನ್ನೋದೇ ಆ್ಯನಾಗೆ ಅರ್ಥವಾಗಲ್ಲ. ಆತನಿಗೆ ತನ್ನ ಮನಸಿನ ಭಾವನೆಯನ್ನು ಹೇಗೆ ಹೇಳಲಿ ಅನ್ನೋ ಚಡಪಡಿಕೆ ಆಕೆಗೆ.

ಹಾಗೇ ಸ್ವಲ್ಪ ದಿನಗಳು ಗತಿಸುತ್ತವೆ. ಒಂದಿನ ಒಂದು ರೂಮಲ್ಲಿ ಇಬ್ಬರೇ ಏಕಾಂತದಲ್ಲಿರ್ತಾರೆ. ಇಬ್ಬರಲ್ಲೂ ಕಾಮಭಾವನೆ ಜಾಗೃತವಾಗುತ್ತೆ.

ಆ ರೊಮ್ಯಾಂಟಿಕ್ ಮೂಡ್ ಲ್ಲಿ ಇಬ್ಬರೂ ಒಂದಾಗ್ತಾರೆ. ಆದ್ರೆ ಇದು ಪ್ರೇಮ ಮಿಲನವೋ, ಕಾಮ ಮಿಲನವೋ..? ಮ್ಯಾಥೀವ್ ತನ್ನ ಫೀಲಿಂಗ್ಸ್ ಹಂಚಿಕೊಂಡಿದ್ದಾನೆ. ಆದರೆ ಆ್ಯನಾಗೆ ಇರೋ ಭಾವನೆ ಏನು.

ಈ ಲವ್ ಸ್ಟೋರಿ ಹೇಗೆ ಮುಂದುವರಿಯುತ್ತೆ.? ಇಬ್ಬರೂ ಹೀಗೇ ಇರ್ತಾರಾ..? ಮದುವೆಯಾಗ್ತಾರಾ.? ಅಥವಾ ಬಿಟ್ಟು ಹೋಗ್ತಾಳಾ..? ಹಳೇ ಫೋಟೋ ನೋಡ್ತಾ ಕೂತಿರೋ ಈ ವಯಸ್ಕ ಯಾರು..? ಹೀಗೆ ಹಲವು ಪ್ರಶ್ನೆಗಳು ನಿಮ್ಮನ್ನು ಕಾಡುತ್ತವೆ.

ನಿಮ್ಮ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದ್ರೆ ನೀವು “A Long Houl” ಶಾರ್ಟ್ ಫಿಲ್ಮ್ ನೋಡ್ಬೇಕು. ಒಂದೊಳ್ಳೆ ಪ್ರೇಮ ಕಥೆ. ಒಂದೊಳ್ಳೆ ಕಿರು ಚಿತ್ರ, ಮಿಸ್ ಮಾಡ್ಕೊಬೇಡಿ.

ಇದು ನನ್ನ ಸ್ನೇಹಿತ ನವೀನ್ ರಾಜ್ ನಿರ್ದೇಶನದ ಕಿರುಚಿತ್ರ. ನವೀನ್ ರಾಜ್ ಸ್ವತಃ ಬರೆದು ಈ ಕಿರುಚಿತ್ರ ನಿರ್ದೇಶಿಸಿದ್ದಾರೆ. ಎಕ್ಸಲೆಂಟ್ ಛಾಯಾಗ್ರಹಣದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರೋರು ರೈಲಾನ್ ಕಾಡ್ರೋಸ್. ಕಿಂಗ್ಸ್ಟನ್ ಯೂನಿವರ್ಸಿಟಿ ಪ್ರೊಡಕ್ಷನ್ ಹೌಸ್, ಕಿರುಚಿತ್ರದ ನಿರ್ಮಾಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಮ್ಯಾಥಿವ್ ಆಗಿ ರಿಚರ್ಡ್ ಲೆಸನ್, ಮತ್ತು ಆ್ಯನಾ ಆಗಿ ಚಾರ್ಲೆಟ್ ಕೋಲ್ಸ್ ಮನೋಙ್ಞವಾಗಿ ಅಭಿನಯಿಸಿದ್ದಾರೆ. ಎಡಿಟಿಂಗ್ ಮಾಡಿರೋರು ಕೂಡ ನವೀನ್ ರಾಜ್ ಅವರೇ. ಇಂಗ್ಲೆಂಡ್ ನ ಕಿಂಗ್ಸ್ಟನ್ ಅಪಾನ್ ಥೆಮ್ಸ್ ಸಿಟಿಯ ಅದ್ಭುತ ಲೊಕೇಶನ್ ಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ.

ನೀರಲ್ಲಿ ಮೀನಿನ ಹೆಜ್ಜೆ ಕಂಡುಹಿಡಿಯಬಹುದು ಆದ್ರೆ ಹೆಣ್ಣಿನ ಮನಸ್ಸು ಅರ್ಥ ಮಾಡಿಕೊಳ್ಳೊದು ಅಸಾಧ್ಯ ಅಂತಾರೆ. ಹೆಣ್ಣಿನ ಸೃಷ್ಟಿಯೇ ಅದ್ಭುತ. ಆಕೆ ಸಿಹಿಯಾದ ಒಗಟು. ಬಿಡಿಸಿದಷ್ಟು ಕಗ್ಗಂಟಾಗ್ತಾಳೆ. ಇದೇ ಥೀಮ್ ಇಟ್ಕೊಂಡು ನವೀನ್ ನವಿರಾದ ಪ್ರೇಮ ಕಥೆ ಹೆಣೆದಿದ್ದಾರೆ.

ಕನ್ನಡದಲ್ಲಿ ಸಿನಿಮಾ ಮಾಡೋ ಆಸೆ ನವೀನ್ ರದ್ದು. ಈಗಾಗಲೆ ಒಂದೊಳ್ಳೆ ಸ್ಕ್ರಿಪ್ಟ್ ರೆಡಿ ಮಾಡಿದ್ದೀನಿ. ಪ್ರೊಡ್ಯೂಸರ್ ಹುಡುಕಾಟದಲ್ಲಿದ್ದೇನೆ ಅಂತಾರೆ ನವೀನ್. ಶುಭವಾಗಲಿ ಗೆಳೆಯ.

• ರಹಮಾನ್ ಹಾಸನ್.